-
-
ಶಿವ
Siva
Author: Vijayashankara
Publisher: Panchajanya Publications
Pages: 562Language: Kannada
“ಲೋ ಶಿವಾ...” ಬೆಚ್ಚಿ ಹಿಂದಿರುಗಿ ನೋಡಿದ ಶಿವ. ಅವನ ಸರಿಸುಮಾರು ವಯಸ್ಸಿನವರೇ ಆದ ಹುಡುಗರ ಗುಂಪೆÇಂದು, ಬಾಯೊಳಗಿನ ದಂತಪಂಕ್ತಿ ಪೂರ್ತಿ ಕಾಣುವಂತೆ ಶಿವನನ್ನೇ ನೋಡುತ್ತಾ ನಗುತ್ತಾ ನಿಂತಿದ್ದರು.
ಅವರ ನಗುವನ್ನು ಗಮನಿಸದ ಶಿವ ಅಮಾಯಕನಂತೆ ಅವರನ್ನೇ ನೋಡುತ್ತಾ ನಿಂತು, ಕೇಳಿದ.
“ಯಾಕ್ರೋ ಕರೆದ್ರಿ? ಏನು?”
“ನಿಮ್ಮ ಅಪ್ಪನ ಹೆಸರೇನೋ?” ಅವನನ್ನು ಕರೆದ ಬಾಲಕ ಕೇಳಿದ.
ಕೆನ್ನೆಗೆ ರಪ್ಪನೆ ಬೀಸಿ ಬಾರಿಸಿದಂತಾಯ್ತು ಶಿವನಿಗೆ. ಅವನ ಅರಿವಿಗೆ ಬಾರದಂತೆಯೇ ಅವನ ಮುಷ್ಟಿ ಬಿಗಿದುಕೊಂಡಿತು. ಕಣ್ಣು ಕೆಂಪೇರಿತು.
“ಅಲ್ನೋಡ್ರೋ ಶಿವನಿಗೆ ಕೋಪಬರ್ತಿದೆ. ಅವನ ಅಮ್ಮನ ಹೆಸರನ್ನೇನಾದರೂ ಕೇಳಿದರೆ ಪರಶಿವನಂತೆ ಮೂರನೇ ಕಣ್ಣನ್ನೂ ತೆರೆದು ನಮ್ಮನ್ನೆಲ್ಲ ಭಸ್ಮ ಮಾಡಿಬಿಡ್ತಾನೆ ಅಂತ ಕಾಣುತ್ತೆ. ಏನು ಮಾಡೋಣ. ಕೇಳಲೋ ಅಥವಾ... ಬೇಡವೋ?” ಇತರ
ಬಾಲಕರತ್ತ ನೋಡುತ್ತಾ ಕೇಳಿದ ಶಿವನನ್ನು ಕರೆದ ಬಾಲಕ.
“ಕೇಳು... ಕೇಳು ಬಿಡಬೇಡ.” ಇತರ ಹುಡುಗರು ಅವನನ್ನು ಕಿಚಾಯಿಸಿದರು. ಅವನನ್ನು ಕೆಣಕಿ ಆನಂದಿಸಲೆಂದೇ ಶಿವನನ್ನು ಕರೆದು ನಿಲ್ಲಿಸಿದ್ದರು.
“ನಿನ್ನ ತಾಯಿ ಹೆಸರೇನೋ ಶಿವಾ...?” ಕೇಳಿಯೇ ಬಿಟ್ಟ ಆ ಹುಡುಗ.
ತನ್ನನ್ನು ತಾನು ಮರೆತುಬಿಟ್ಟ ಶಿವ. ತಾನು ಸಂಪಂಗಿ ನಗರದ ಕೋಟೆಯ ಹೊರಗಡೆ ಹರಿಯುತ್ತಿರುವ ಸುವರ್ಣಾ ನದಿಯ ದಡದಲ್ಲಿದ್ದೇನೆ ಎನ್ನುವುದನ್ನೂ ಮರೆತ.
