-
-
ಸರಸ್ವತಿ ವಿಸ್ಮಯ ಸಂಸ್ಕೃತಿ
Saraswathi Vismaya Samskriti
Author: Dr.B.R. Satyanarayana
Publisher: Self Published on Kinige
Pages: 400Language: Kannada
ಸರಸ್ವತಿ, ಜ್ಞಾನಕೋಶ ಮಾದರಿಯ ಕೃತಿಯಾಗಿದೆ. ಇಂಥ ಕೃತಿಯನ್ನು ರಚಿಸುವುದಕ್ಕೆ ಒದಗಿಬಂದ ಪ್ರೇರಣೆ ಮತ್ತು ಕಾರಣವನ್ನು ಕುರಿತು ಲೇಖಕರೇ ತಮ್ಮ ಕೃತಿಯಲ್ಲಿ ಪ್ರಸ್ತಾಪಿಸಿದ್ದಾರೆ. ಸರಸ್ವತಿಯ ಬಗೆಗೆ ಇದುವರೆಗೆ ನಡೆದಿರುವ ಮಹತ್ವವೆನ್ನಬಹುದಾದ ಅಧ್ಯಯನಗಳು ಕೂಡಾ ತಮ್ಮಷ್ಟಕ್ಕೆ ತಾವು ಸೀಮಿತಾರ್ಥದಲ್ಲಿ ಪರಿಪೂರ್ಣವಾದರೂ, ಕನ್ನಡ ಭಾಷೆ, ಸಾಹಿತ್ಯ, ಸಂಸ್ಕೃತಿಗಳ ವಿಷಯಕ್ಕೆ ಬಂದಾಗ ಅಪೂರ್ಣವಾಗಿರುವುದನ್ನು ಗಮನಿಸಿದ್ದೇವೆ. ಕನ್ನಡದಲ್ಲಿಯಂತೂ ಸರಸ್ವತಿಯನ್ನು ಕುರಿತು ಒಂದು ಸಮಗ್ರವೆನ್ನಬಹುದಾದ ಅಧ್ಯಯನವಾಗಿಯೇ ಇಲ್ಲ. ಸುಮಾರು ಎರಡು ಸಾವಿರ ವರ್ಷಗಳಿಂದ ಜೀವಂತವಿರುವ, ಒಂದು ಜೀವಂತ ಸಂಸ್ಕೃತಿಯ ಹಿನ್ನೆಲೆಯಲ್ಲಿ ಅಂಥ ಸಂಶೋಧನೆಯನ್ನು ನಡೆಸುವುದೇ ಪ್ರಸ್ತುತ ಅಧ್ಯಯನದ ಮೂಲ ಉದ್ದೇಶ. ಲೇಖಕರ ಈ ಮೂಲ ಉದ್ದೇಶವು ಈ ಕೃತಿಯಲ್ಲಿ ಸಮರ್ಥವಾಗಿ ಸಾಧಿತವಾಗಿದೆ ಎಂಬುದು ಅಭಿಮಾನಪಡಬಹುದಾದ ಸಂಗತಿಯಾಗಿದೆ. ಲೇಖಕರೇ ಸೂಚಿಸಿರುವಂತೆ, ಕನ್ನಡ ಸಂಸ್ಕೃತಿಯ ಅವಿಭಾಜ್ಯ ಆಕರಗಳಾದ ಸಾಹಿತ್ಯ, ಜಾನಪದ, ಶಾಸನ, ಶಿಲ್ಪ, ಚಿತ್ರಕಲೆ ಮೊದಲಾದವುಗಳ ಹಿನ್ನೆಲೆಯಲ್ಲಿ ಅಧ್ಯಯಯನವನ್ನು ನಡೆಸಲಾಗಿದೆ. ಅದಕ್ಕೆ ಪೂರ್ವಭಾವಿಯಾಗಿ ಸರಸ್ವತಿಯ ಮೂಲ ಸ್ವರೂಪವನ್ನು ಅರಿಯಲು ವೈದಿಕ, ಜೈನ, ಮತ್ತು ಬೌದ್ಧ ಮತಗಳ ಸರಸ್ವತಿ ಮತ್ತು ವಿಶ್ವಸಂಸ್ಕೃತಿಯಲ್ಲಿ (ಅದನ್ನು ಅನ್ಯದೇಶೀಯ ಸಂಸ್ಕೃತಿಗಳಲ್ಲಿ ಎನ್ನುವುದು ಹೆಚ್ಚು ಸೂಕ್ತ) ಸರಸ್ವತಿಗೆ ಸಮಾನವಾದ ಸ್ವರೂಪವುಳ್ಳ ದೇವತೆಗಳ ಸ್ವರೂಪವನ್ನೂ ಕುರಿತು ಅಧ್ಯಯನ ನಡೆಸಲಾಗಿದೆ. ಇವುಗಳಲ್ಲದೆ ಕನ್ನಡ ಸಂಸ್ಕೃತಿಯನ್ನು ಪ್ರಭಾವಿಸಿರುವ ವೈದಿಕ ಪುರಾಣಗಳು, ಮಹಾಕಾವ್ಯಗಳಲ್ಲಿ ಅಂತರ್ಗತವಾಗಿರುವ ಸರಸ್ವತಿಯ ಬಗೆಗಿನ ವಿಚಾರಗಳನ್ನು ಗಮನಿಸಲಾಗಿದೆ. ಕನ್ನಡ ಸಾಹಿತ್ಯದ ವಸ್ತು, ವಿಷಯ, ರೂಪ, ಛಂದಸ್ಸು, ಕಾವ್ಯಮೀಮಾಂಸೆ ಇವುಗಳ ಮೇಲೆ ಅತಿ ಹೆಚ್ಚು ಪ್ರಭಾವ ಬೀರಿದ ಸಂಸ್ಕೃತ ಸಾಹಿತ್ಯದ ಕೆಲವು ಪ್ರಮುಖ ಕವಿಗಳ ಸರಸ್ವತೀ ಸಂಬಂಧೀ ವಿಷಯಗಳನ್ನು ಕನ್ನಡ ಸಾಹಿತ್ಯ ಸರಸ್ವತಿಯ ಅಧ್ಯಯನಕ್ಕೆ ಪೂರಕವಾಗಿ ಬಳಸಿಕೊಳ್ಳಲಾಗಿದೆ. ಕರ್ನಾಟಕ ರಾಜ್ಯಾದ್ಯಂತ ಸಿಗುವ ನೂರಾರು ಸರಸ್ವತಿಯ ಶಿಲ್ಪಗಳ ಅಧ್ಯಯನಕ್ಕೆ ಪೂರ್ವಭಾವಿಯಾಗಿ ವೈದಿಕ, ಜೈನ, ಬೌದ್ಧ ಮತಗಳ ಶಿಲ್ಪಶಾಸ್ತ್ರೀಯ ಆಧಾರ ಗ್ರಂಥಗಳನ್ನಲ್ಲದೆ, ತಾಂತ್ರಿಕ ಪಠ್ಯಗಳನ್ನೂ ಗಮನಿಸಲಾಗಿದೆ.
